ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯು 1945 ರಲ್ಲಿ ಸ್ವತಂತ್ರ ಇಲಾಖೆಯಾಗಿ ರೂಪುಗೊಂಡಿತು. ರಾಜ್ಯದ ಜಾನುವಾರು ಸಂಪತ್ತಿಗೆ ಅರೋಗ್ಯ ರಕ್ಷಣೆ ನೀಡುವ ಹೊಣೆಗಾರಿಕೆಯ ಜೊತೆಗೆ ಜಾನುವಾರು ಅಭಿವೃದ್ಧಿ ಚಟುವಟಿಕೆ, ವಿಸ್ತರಣಾ ಸೇವೆಗಳು ಮತ್ತು ತರಬೇತಿ, ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳ ಅನುಷ್ಠಾನ, ಮಾದರಿ ಸಮೀಕ್ಷೆ ಮತ್ತು ಜಾನುವಾರು ಗಣತಿ ಮುಂತಾದ ಕಾರ್ಯಾಕ್ರಮಗಳನ್ನು ಇಲಾಖೆಯು ತನ್ನ ವಿವಿಧ ಸ್ತರದ ಪಶುವೈದ್ಯ ಸಂಸ್ಥೆಗಳ ಜಾಲದ ಮೂಲಕ ಯಶಸ್ವಿಯಾಗಿ ನಿರ್ವಹಿಸುತ್ತಿದೆ.
ಜುಲೈ 12, 1945 ಗೆಜೆಟ್ ನೋಟಿಫಿಕೇಷನ್.
1572-1600: ವಿಜಯನಗರದಿಂದ ತಂದ ಹಳ್ಳಿಕಾರ್ ಹಸುಗಳನ್ನು ಹೊಂದಿದ ವಿಜಯನಗರದ ವೈಸ್-ರಾಯ್ ರವರ ಶ್ರೀರಂಗಪಟ್ಟಣದಲ್ಲಿನ 'ಕರುಹಟ್ಟಿ' ಎಂಬ ಸಂಸ್ಥೆಯ ಮೂಲಕ ಜಾನುವಾರು ಅಭಿವೃದ್ಧಿ ಕಾಯಕವನ್ನು ಪ್ರಾರಂಭಿಸಲಾಯಿತು.
1967-1704: ಆಗಿನ ಮೈಸೂರಿನ ಮಹಾರಾಜರು ಕಾಲಾನುಸಾರವಾಗಿ ಈ ಕರುಹಟ್ಟಿಗೆ ರಾಸುಗಳನ್ನು ಸೇರಿಸಿ, ಈ ರಾಸುಗಳಿಗೆ ನಿಗದಿತ 'ಕಾವಲು'ಗಳನ್ನು ತಮ್ಮ ರಾಜ್ಯದ ವಿವಿಧ ಭಾಗದಲ್ಲಿ ನೀಡಿದರು. ಅಂದಿನ ಮಹಾರಾಜರಾದ ಸನ್ಮಾನ್ಯ ಶ್ರೀ ಚಿಕ್ಕದೇವರಾಜ ಒಡೆಯರ್ ರವರು ಈ ಸಂಸ್ಥೆಗೆ 'ಬೆಣ್ಣೆ ಚಾವಡಿ' ಎಂದು ನಾಮಕರಣ ಮಾಡಿದರು.
1799: ಟಿಪ್ಪು ಸುಲ್ತಾನರು ಬೆಣ್ಣೆ ಚಾವಡಿ ಹೆಸರನ್ನು 'ಅಮೃತ್ ಮಹಲ್' ಎಂದು ಮರುನಾಮಕರಣ ಮಾಡಿ, ಅಮೃತ್ ಮಹಲ್ ತಳಿಯ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ತೋರಿದರು. ಹಾಗೂ ಈ ಇಲಾಖೆಯ ಉನ್ನತೀಕರಣಕ್ಕಾಗಿ ಸೂಕ್ತ ಕಾಯ್ದೆಗಳನ್ನು ಹುಕುಂನಾಮ ಮುಖೇನ ಅಳವಡಿಸಿದರು.
1799-1881: ಟಿಪ್ಪು ಸುಲ್ತಾನರ ಅವನತಿಯ ನಂತರ ಅಮೃತ್ ಮಹಲ್ ಇಲಾಖೆಯ ಉಸ್ತುವಾರಿಯನ್ನು ಬ್ರಿಟೀಷರು ತೆಗೆದುಕೊಂಡು ಅವರ ರೀತಿಯಲ್ಲಿಯೇ ಅಮೃತ್ ಮಹಲ್ ದನಗಳನ್ನು ಹಾಲು, ಉಳುಮೆ ಹಾಗೂ ಯುದ್ಧಗಳಲ್ಲಿ ಉಪಯೋಗಿಸುವ ಸಲುವಾಗಿ ಅಭಿವೃದ್ಧಿಪಡಿಸಲು ಕ್ರಮ ಜರುಗಿಸಿದರು. ಈ ಇಲಾಖೆಗೆ ಒಟ್ಟು 143 ಕಾವಲುಗಳಿದ್ದು, ಇವುಗಳ ಉಸ್ತುವಾರಿಯನ್ನು ಅಂದಿನ ಬ್ರಿಟೀಷ್ ಸರ್ಕಾರದ ಮಿಲಿಟರಿ ಸಹಾಯಕರಿಗೆ ನೀಡಲಾಯಿತು.
1897: ಅಮೃತ್ ಮಹಲ್ ಇಲಾಖೆಯ ಉಸ್ತುವಾರಿಯನ್ನು ನೋಡಿಕೊಳ್ಳಲು ಒಬ್ಬರು ಪ್ರತ್ಯೇಕ ಅಧೀಕ್ಷಕರನ್ನು ನೇಮಿಸಲಾಯಿತು.
1915-16: ಅಮೃತ್ ಮಹಲ್ ಇಲಾಖೆಯನ್ನು ಕೃಷಿ ಇಲಾಖೆಗೆ ವರ್ಗಾಯಿಸಿ, ಈ ವಿಭಾಗವನ್ನು ಪಶುಸಂಗೋಪನೆ ತಜ್ಞರ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸುವಂತೆ ವ್ಯವಸ್ಥೆಗೊಳಿಸಲಾಯಿತು.
1945: ಈ ವಿಭಾಗವನ್ನು ಕೃಷಿ ಇಲಾಖೆಯಿಂದ ಬೇರ್ಪಡಿಸಿ, ಮೈಸೂರು ರಾಜ್ಯದ ಪಶುಸಂಗೋಪನೆ ಮತ್ತು ಪಶುವೈದ್ಯ ಸೇವಾ ಇಲಾಖೆಯನ್ನಾಗಿ ಮಾಡಲಾಯಿತು.